ಹೊಸಪೇಟೆಯಲ್ಲಿ ತಲೆಎತ್ತಲಿದೆ ಹಂಪಿ ವೈಭವದ ರಂಗಮಂದಿರ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ರಿಂದ ಚಾಲನೆ!

ಕೇಂದ್ರ ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಇಂದು ಬೆಳಿಗ್ಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಟಿ.ಬಿ. ಡ್ಯಾಮ್ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗಲಿರುವ “ವಿಜಯನಗರ ಜಿಲ್ಲಾ ಸಾಂಸ್ಕೃತಿಕ ಕೇಂದ್ರ” (ರಂಗಮಂದಿರ)ಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ರಾಜ್ಯ ಪ್ರವಾಸದ ಭಾಗವಾಗಿ ಜಿಲ್ಲೆಗೆ ಆಗಮಿಸಿದ್ದ ಸಚಿವರು ಭೂಮಿ ಪೂಜೆ ನೆರವೇರಿಸಿದ ಬಳಿಕ, ರಂಗಮಂದಿರದ ಪ್ರಧಾನ ವಾಸ್ತುಶಿಲ್ಪ ವಿನ್ಯಾಸಕಾರರಾದ ಅವಿನಾಶ್ ಜೈನ್ ಅವರಿಂದ ಯೋಜನೆಯ ನೀಲನಕ್ಷೆ ಹಾಗೂ ವಿನ್ಯಾಸದ ಕುರಿತು ಮಾಹಿತಿ ಪಡೆದರು. ಸಂಸದರ ಅನುದಾನದಡಿ ಒಟ್ಟು 3 ಎಕರೆ ಜಾಗದಲ್ಲಿ ಈ ಭವ್ಯ ಸಾಂಸ್ಕೃತಿಕ ಕೇಂದ್ರ ನಿರ್ಮಾಣಗೊಳ್ಳುತ್ತಿದೆ.

ಈ ನೂತನ ರಂಗಮಂದಿರವು ವಿಶ್ವವಿಖ್ಯಾತ ಹಂಪಿಯ ಕಲ್ಲಿನ ರಥ, ರಂಗಮಂಟಪ, ಪ್ರವೇಶ ಮಂಟಪ ಹಾಗೂ ಗೋಪುರದ ವಾಸ್ತುಶಿಲ್ಪ ಶೈಲಿಯನ್ನು ಹೊಂದಿರಲಿದೆ. ಕಟ್ಟಡವು 500 ಪ್ರಧಾನ ಆಸನಗಳು ಹಾಗೂ 120 ಬಲ್ಕನಿ ಆಸನಗಳ ವ್ಯವಸ್ಥೆಯನ್ನೊಳಗೊಂಡಿರಲಿದ್ದು, ಮುಕ್ತ ಆಕಾಶ ರಂಗಮಂದಿರ, ಕಲಾ ಗ್ಯಾಲರಿ, ಪ್ರದರ್ಶನ ಸಭಾಂಗಣ, ಮಿನಿ ಥಿಯೇಟರ್ ಹಾಗೂ ಸುಸಜ್ಜಿತ ಗ್ರಂಥಾಲಯಗಳನ್ನು ಒಳಗೊಂಡಿರಲಿದೆ.

ಇದೇ ಸಂದರ್ಭದಲ್ಲಿ ಜೂನ್ 5ರ ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಕೇಂದ್ರ ಸಚಿವರು ರಂಗಮಂದಿರದ ಆವರಣದಲ್ಲಿ “ಏಕ್ ಪೇಡ್ ಮಾ ಕೆ ನಾಮ್” ಅಭಿಯಾನದ ಅಡಿಯಲ್ಲಿ ಸಸಿ ನೆಟ್ಟರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಸಂಸದರಾದ ಈ. ತುಕಾರಾಮ್, ವಿಜಯನಗರ ಕ್ಷೇತ್ರದ ಶಾಸಕರಾದ ಹೆಚ್.ಆರ್. ಗವಿಯಪ್ಪ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾನ್ಹವಿ ಸೇರಿದಂತೆ ಜಿಲ್ಲಾ ಮತ್ತು ಹೊಸಪೇಟೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.