ಕಷ್ಟಪಟ್ಟು ದುಡಿದ ಹಣವನ್ನ ಸ್ವಂತಕ್ಕೆ ಬಳಸಿಕೊಳ್ಳೋರ ಮಧ್ಯೆ, ತಾವು ಬೆವರು ಹರಿಸಿ ಗಳಿಸಿದ ಕೂಲಿ ಹಣವನ್ನ ಸರ್ಕಾರಿ ಶಾಲಾ ಮಕ್ಕಳಿಗಾಗಿ ಮುಡಿಪಾಗಿಟ್ಟ ಅಪರೂಪದ ರೈತಮಹಿಳೆಯೊಬ್ಬರು ನಮ್ಮ ವಿಜಯನಗರ ಜಿಲ್ಲೆಯಲ್ಲಿದ್ದಾರೆ!
ಹೌದು, ಕಾಗನೂರು ಗ್ರಾಮದ ಶ್ರೀಮತಿ ಗೌಡ್ರು ಹಾಲಮ್ಮ ಶಿವಕುಮಾರ್ ಅವರು ತಾವು ನರೇಗಾ ಅಂದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಷ್ಟಪಟ್ಟು ದುಡಿದ ಹಣವನ್ನು ಸರ್ಕಾರಿ ಶಾಲೆಯ ಬಡ ಮಕ್ಕಳ ಕಲಿಕಾ ಸಾಮಗ್ರಿಗಳಿಗೆ ವಿನಿಯೋಗಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇವರ ಪತಿ ಶಿವಕುಮಾರ್ ಕಾಗನೂರು ಈಗಾಗಲೇ ‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನದ ಮೂಲಕ ರಾಜ್ಯಾದ್ಯಂತ ಸದ್ದು ಮಾಡ್ತಿದ್ದು, ಈಗ ಪತ್ನಿ ಹಾಲಮ್ಮ ಕೂಡ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ಮೂಲಕ ಪತಿಯ ಸತ್ಕಾರ್ಯಕ್ಕೆ ಹೆಗಲು ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ತಮಗೆ ಬರ್ತಿದ್ದ ‘ಗೃಹಲಕ್ಷ್ಮಿ’ ಹಣವನ್ನು ಕೂಡ ಇವರು ಪುಸ್ತಕವೊಂದರ ಮುದ್ರಣಕ್ಕೆ ಧನಸಹಾಯ ಮಾಡಿ ಸಮಾಜ ಸೇವೆ ಮಾಡಿದ್ದರು.
ಇವರ ಈ ಅದ್ಭುತ ಕಾರ್ಯಕ್ಕೆ ನವಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ನರೇಗಾ ಕೂಲಿ ಕಾರ್ಮಿಕರೆಲ್ಲರೂ ಸೇರಿ ಹಾಲಮ್ಮ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.