ಹೆಲ್ತಿ ಕ್ರೀಮಿ ಪಾಸ್ತಾ

ಮಕ್ಕಳಿಂದ ಹಿಡಿದು ದೊಡ್ಡವರಿಗೆ ಇಷ್ಟವಾಗುವ ಹೆಲ್ತಿ ಕ್ರೀಮಿ ಪಾಸ್ತಾ ರೆಸಿಪಿ ಇಲ್ಲಿದೆ.😋

ಬೇಕಾಗುವ ಸಾಮಗ್ರಿಗಳು*

*ನಿಮಗೆ ಇಷ್ಟವಾದ ಯಾವುದೇ ಆಕಾರದ ಎರಡು ಕಪ್ ಪಾಸ್ತಾ *ಎರಡು ಚಮಚ ಆಲಿವ್ ಆಯಿಲ್, *ಎರಡು ಕಪ್ ಕತ್ತರಿಸಿದ ತರಕಾರಿಗಳು (ಬ್ರೊಕೋಲಿ, ಸ್ವೀಟ್ ಕಾರ್ನ್, ಕ್ಯಾಪ್ಸಿಕಂ, ಅಣಬೆ),

*ಎರಡು ಚಮಚ ಬೆಣ್ಣೆ,

*ಎರಡು ಚಮಚ ಮೈದಾ ಹಿಟ್ಟು, *ಎರಡು ಕಪ್ ಹಾಲು

*ಎರಡು ಕಪ್ ತುರಿದ ಚೀಸ್ (ಮೊಜರೆಲ್ಲಾ ),

*ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕಾಳುಮೆಣಸಿನ ಪುಡಿ.

**ಪಾಸ್ತಾ ಬೇಯಿಸುವ ವಿಧಾನ* ಮೊದಲಿಗೆ ಒಂದು ದೊಡ್ಡ ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ಕುದಿಯುವಾಗ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಪಾಸ್ತಾ ಹಾಕಿ ಬೇಯಿಸಿಕೊಳ್ಳಿ. ಪಾಸ್ತಾ ಅತಿಯಾಗಿ ಬೇಯದಂತೆ ಹದವಾಗಿ ಬೆಂದ ನಂತರ, ನೀರನ್ನು ಸಂಪೂರ್ಣವಾಗಿ ಸೋಸಿ ಪಾಸ್ತಾವನ್ನು ಪಕ್ಕಕ್ಕೆ ಎತ್ತಿಟ್ಟುಕೊಳ್ಳಿ.

*ತರಕಾರಿಗಳನ್ನು ಬೇಯಿಸುವುದು ಈಗ ಒಂದು ಬಾಣಲಿಗೆಗೆ ಆಲಿವ್ ಆಯಿಲ್ ಹಾಕಿ ಬಿಸಿ ಮಾಡಿ. ಅದಕ್ಕೆ ನೀವು ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಸೇರಿಸಿ. ಜೊತೆಗೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿಯನ್ನು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ತರಕಾರಿಗಳು ಸ್ವಲ್ಪ ಮೆತ್ತಗಾದ ತಕ್ಷಣ ಅವುಗಳನ್ನು ಒಂದು ತಟ್ಟೆಗೆ ತೆಗೆದಿಟ್ಟುಕೊಳ್ಳಿ.

*ಕ್ರೀಮಿ ಚೀಸ್ ಸಾಸ್ ತಯಾರಿ

ಅದೇ ಬಾಣಲಿಗೆಯಲ್ಲಿ ಬೆಣ್ಣೆಯನ್ನು ಹಾಕಿ ಕರಗಿಸಿ. ನಂತರ ಅದಕ್ಕೆ ಮೈದಾ ಹಿಟ್ಟನ್ನು ಸೇರಿಸಿ ಗಂಟಿಲ್ಲದಂತೆ ಒಂದು ನಿಮಿಷ ಚೆನ್ನಾಗಿ ಕೈಯಾಡಿಸಿ. ಈಗ ಉರಿಯನ್ನು ಕಡಿಮೆ ಮಾಡಿ, ಹಾಲನ್ನು ಸ್ವಲ್ಪ ಸ್ವಲ್ಪವಾಗಿ ಸುರಿಯುತ್ತಾ ಸತತವಾಗಿ ಕೈಯಾಡಿಸುತ್ತಿರಿ. ಮಿಶ್ರಣವು ಗಟ್ಟಿಯಾಗುವವರೆಗೆ ಅಂದರೆ ಸುಮಾರು ಐದರಿಂದ ಏಳು ನಿಮಿಷ ಬೇಯಿಸಿ. ನಂತರ ಇದಕ್ಕೆ ತುರಿದ ಚೀಸ್ ಸೇರಿಸಿ, ಅದು ಸಂಪೂರ್ಣವಾಗಿ ಕರಗುವವರೆಗೆ ಕೈಯಾಡಿಸಿ.

*ಮಿಶ್ರಣ ಮಾಡಿ ಸವಿಯಿರಿ

ಈಗ ಸಿದ್ಧವಾಗಿರುವ ಕ್ರೀಮಿ ಸಾಸ್‌ಗೆ ಮುಂಚಿತವಾಗಿ ಬೇಯಿಸಿಟ್ಟ ಪಾಸ್ತಾವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೇಯಿಸಿಕೊಂಡಿರುವ ತರಕಾರಿಗಳನ್ನು ಸೇರಿಸಿ ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಕೊನೆಯದಾಗಿ ರುಚಿ ನೋಡಿ ಅಗತ್ಯವಿದ್ದರೆ ಸ್ವಲ್ಪ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ. ಮೇಲೆ ಇನ್ನಷ್ಟು ತುರಿದ ಚೀಸ್ ಉದುರಿಸಿದರೆ ಬಿಸಿಬಿಸಿಯಾದ ಚೀಸಿ ವೆಜಿಟೇಬಲ್ ಪಾಸ್ತಾ ಸವಿಯಲು ಸಿದ್ಧ.😋